ಚಿಟ್ಟೆ.

ಮನದ ಮೌನ ಕಿಸಕ್ಕನೆ ನಕ್ಕಾಗ
ಅಲ್ಲೊಂದು ಮಧುವಿನ ಪರಿಮಳ
ಆಗ ರೆಕ್ಕೆಬಿಚ್ಚುತ್ತದೆ ಮಾತುಗಳು
ಬಣ್ಣಬಣ್ಣದ ಚಿಟ್ಟೆಯಾಗಿ.

ಕವಿ ಲೇಖನಿಯ ಶಾಯಿ ಮುಗಿದಾಗ
ಅಲ್ಲಾಗ ಕಟ್ತಲೆಯ ಪರದಾಟ
ಆಗ ಮಿನುಗುತ್ತದೆ ಕವಿತೆ
ಹಿಡಿಯಲು ಆಗದ ಚಿಟ್ಟೆಯಾಗಿ.

ರಾತ್ರಿಯ ಕನಸುಗಳಡಿಯಲ್ಲಿ ಮನ ಕುಣಿದಾಗ
ನಸು ಬೆಳಕಿನಲ್ಲಿ ಮುಗಿಯದ ಮುಂಜಾವು
ಆಗ ಸಂಭ್ರಮಿಸುತ್ತದೆ ದಿನ
ಹೊಳೆಯುವ ಚಿಟ್ಟೆಯಾಗಿ .

ಎಲ್ಲಿಂದಲೋ ಕೋಗಿಲೆ ಕುಹೂ ಎಂದಾಗ
ಯಾರದೋ ಹೃದಯದಲಿ ಸರಿಗಮಗಳ ನರ್ತನ
ಮನಸ್ಸಿನಲ್ಲಿ ಸಣ್ಣದೊಂದು ಕಲರವ ಅದಕೆ
ದನಿಯಾಗುತ್ತದೆ ಉತ್ಸವದ ಚಿಟ್ಟೆಯಾಗಿ .

1 comment ಮೇ 17, 2010

ಹೇಳಿ ಹೋಗು ಕಾರಣ..

ರಾತ್ರಿ ಕಂಡ ಕನಸುಗಳಿಗೆಲ್ಲ ಮುಂಜಾವಿಲ್ಲ ಗೆಳೆಯ
ಬಹುಶ: ತಿಳಿದಿರಬೇಕು ಇದು ನನಸಾಗಲಾರದೆಂದು

ನನ್ನ ನಗುವಿನ ಸುತ್ತಲಿದ್ದ ಆಸೆಗಳೆಲ್ಲ ಕಮರಿದಂತೆ
ನಿನ್ನ ಕಣ್ಣುಗಳು ಏನೇನೋ ಹೇಳುತಿರುವಂತೆ
ಸದ್ದಾಗದ ಹೃದಯದಿ ಭಾವನೆಗಳ ತೋಡಿದಂತೆ
ಅವನ ಆಯ್ಕೆಯ ಮುಂದೆ ಕನಸ ಹರಡಿದಂತೆ
ಇದೆಲ್ಲವೂ ಮರೆತಂತೆಲ್ಲಾ ಮತ್ತೆ ಮತ್ತೆ ನೆನಪಾದಂತೆ

ಇದೀಗ ತಾನೆ ರೂಪ ತಳೆದಿದೆ ಅಲ್ಲೊಂದು ಪಾಳುಮನೆ
ಈ ಮುಂಚೆ ಅದೊಂದು ಸುಂದರ ಪ್ರೇಮಲೋಕ
ಅಲ್ಲಲ್ಲಿ ಕಾಣಸಿಗವ ಹೆಜ್ಜೆ ಗುರುತುಗಳ ಮೆರವಣಿಗೆ
ಲೆಕ್ಕವಿಲ್ಲದಸ್ಟು ಬರೆದ ಕಾಗದ ಬರವಣಿಗೆ
ಇದೆಲ್ಲವೂ ಮರೆತಂತೆಲ್ಲಾ ಮತ್ತೆ ಮತ್ತೆ ನೆನಪಾದಂತೆ

ಅದೋ ಕೊನೆಯಿಲ್ಲದ ನೆನಪಂತೆ ಭೋರ್ಗರೆವ ಸಮುದ್ರ ತೀರ
ಅಲ್ಲಿಗ ಪ್ರತಿದ್ವನಿಸುತ್ತಿದೆ ಹಂಚಿಕೊಂಡಂತ ಸವಿಮಾತುಗಳು
ಹಾಗೂ ಬಾರದಿದ್ದರೂ ತಾಳಕ್ಕೆ ಅನುಸರಿಸಿದ್ದ ಗೆಜ್ಜೆಗಳು
ಇವೆಲ್ಲ ಇಂದು ಬೆಳಕರಿಯದ ಸೂರಿನಡಿ ಮಲಗಿವೆ
ಜೋರಾದ ಗಾಳಿಯ ರಭಸಕೆ ತರಗೆಲಗಳು ಮುಚ್ಚಿದೆ
ಕಳೆದು ಹೋದ ದಿನಗಳ ಹುಡುಕಿದರೆ ಅಲ್ಲಿ ಸಿಕ್ಕೀತೆ..?

ಹೊತ್ತು ಕಳೆದಂತೆಲ್ಲ ನೆನಪಾಗುವೆ ಗೆಳೆಯ ಅದಕೆ
ಹೇಳಿ ಹೋಗು ಕಾರಣ ಮತ್ತೆ ನೆನಪಾಗದಂತೆ…

Add a comment ಮೇ 17, 2010

ಅಂತರಂಗದ ಮೃದಂಗ ಅಂತು ತೋಂ ತನಾನ

ಅಂತರಂಗದ ಮೃದಂಗ ಅಂತು ತೋಂ ತನಾನ
ಚಿತ್ತ ತಾಳ ಬಾರಿಸುತಲಿದ್ದು ಝಂ ಝಣಣ ನಾ
ನೆನಪು ತಂತಿ ಮೀಟುತಿತ್ತು ತೋಂತನನ ತಾನ ತೋಂತನನ ತಾನ ತೋಂತನನ ತಾನ ನ

ಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ
ಏಕನಾದದಂಥದೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ

ಕಲ್ಪದಾದಿಯಲ್ಲಿ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ
ಮರೆವೆಗೊಂದು ಬಿದ್ದೆ ನಾನು ನೆಲದ ಮಣ್ಣು ತಾಗಿ

ಕತ್ತಲಲ್ಲಿ ಬೆಳಕು ಮಿಂಚಿ ಪಡೆತಿತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹಬ್ಬಿತಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ

Add a comment ಮೇ 7, 2010

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಬಿತ್ತಿಗಳಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ

ನಿತ್ಯೋತ್ಸವ ತಾಯೆ ನಿತ್ಯೋತ್ಸವ

ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ
ಸದ್ವಿಕಾಸ ಶೀಲ ನುಡಿಯ ಲೋಕಾವೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ

Add a comment ಮೇ 7, 2010

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ ಎಂದು ಶೃತಿ ಹಿಡಿದು ಸುರಿಯುತ್ತಿತ್ತು
ಅದಕೆ ಹಿಮ್ಮೇಳವನೆ ಸೂಸಿ ಬಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತ್ತಿತ್ತು

ಇಳೆ ವೆಣ್ನು ಮೈದೊಳೆದು ಮಕರಂದದರಿಷಿನದಿ
ಹೂ ಮುಡಿದು ಮಧುಮಗಳ ಹೋಲುತ್ತಿತ್ತು
ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು

ಹುಲ್ಲೆಸಳು ಹೂಕಪಳೆ ಮುತ್ತು ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತ್ತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತ್ತಿತ್ತು

ತಳಿರ ತೋರಣದಲ್ಲಿ ಬಳ್ಳಿ ಬಾಣಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತ್ತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣದುಣಿತ ಹಾಕುತ್ತಿತ್ತು

ಉಷೆಯ ನುಂಟದಪಿನಲಿ ಹರ್ಷ ಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತ್ತಿತ್ತು
ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತ್ತಿತ್ತು

1 comment ಮೇ 7, 2010

ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ

ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ
ಮಿಡಿದ ನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು ನಾದ ರೂಪಕ

ಭುವನವೆಲ್ಲ ಸವಿಯ ಸೊಲ್ಲ ಕವಿಯ ಗಾನ
ನನ್ನ ನಿನ್ನ ಹೃದಯ ಮೀನ
ಕಲ್ಲಿಜೇನ ಸೊಗದ ಸ್ನಾನ ಅಮೃತ ಪಾನ

ತಂತಿ ಇಂಚರದಿ ವಿಪಂಚಿ ರಸ ಪ್ರಳಯಿಸೆ
ನನ್ನ ನಿನ್ನ ಜೀವ ಮಾನ
ತಾನ ತಾನ ತನನ ತಾನ ಪ್ರಾಣ ಪುಳಕಿಸೆ

Add a comment ಮೇ 7, 2010

ತೊರೆದು ಹೋಗದಿರೊ ಜೋಗಿ

ತೊರೆದು ಹೋಗದಿರೊ ಜೋಗಿ
ಅಡಿಗೆರಗಿದ ಈ ದೀನಳ ಮರೆತು ಸಾಗುವೆ ಏಕೆ ವಿರಾಗಿ

ಪ್ರೇಮ ಹೋಮದ ಪರಿಮಳ ಪಥದಲಿ ಸಲಿಸು ದೀಕ್ಷೆ ಎನಗೆ
ನಿನ್ನ ವಿರಹದಲಿ ಒರೆದು ಹೋಗಲು ಸಿದ್ಧಳಿರುವ ನನಗೆ

ಹೂಡುವೆ ಗಂಧದ ಚಿತೆಯ ನಡುವೆ ನಿಲುವೆ ನಾನೇ
ಉರಿ ಸೋಕಿಸು ಪ್ರಭುವೆ ಚಿತೆಗೆ ಪ್ರೀತಿಯಿಂದ ನೀನೇ

ಉರಿದು ಉಳಿವೆನು ಬೂಧಿಯಲಿ ಲೇಪಿಸಿಕೋ ಅದ ಮೈಗೆ
ಮೀರಾ ಪ್ರಭು ಗಿರಿಧರನೇ ಜ್ಯೋತಿಯು ಜ್ಯೋತಿಯ ಸೇರಲಿ ಹೀಗೆ

Add a comment ಮೇ 7, 2010

ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು

ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು
ಕಡಲು ನಿನ್ನದೆ ಹಡಗು ನಿನ್ನದೆ ಮುಳುಗದಿರಲಿ ಬದುಕು

ಬೆಟ್ಟವು ನಿನ್ನದೆ ಬಯಲು ನಿನ್ನದೆ ಹಬ್ಬಿನದಲಿ ಪ್ರೀತಿ
ನೆಳಲೊ ಬಿಸಿಲೊ ಎಲ್ಲವು ನಿನ್ನದೆ ಇರಲಿ ಏಕ ರೀತಿ

ಆಗೊಂದು ಸಿಡಿಲು ಈಗೊಂದು ಮುಗಿಲು ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು ನಿನಗೆ ನಮಸ್ಕಾರ

ಅಲ್ಲಿ ರಣದುಂದುಭಿ ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ
ಆ ಮಹಾಕಾವ್ಯ ಈ ಭಾವಗೀತೆ ನಿನ್ನ ಪದ ಧ್ವನಿಯೆ

Add a comment ಮೇ 7, 2010

ಎದೆ ತುಂಬಿ ಹಾಡಿದೆನು ಅಂದು ನಾನು

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರೂ ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ

ಎದೆ ತುಂಬಿ ಹಾಡಿದೆನು ಇಂದು ನಾನು
ಮನವಿಟ್ಟು ಕೇಳಿದಿರಿ ಇಲ್ಲಿ ನೀವು..

Add a comment ಮೇ 7, 2010

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ

ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ

ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪೋ
ಬಂದು ಚೀರುವೆದೆಯ ಭಾವ ಹೇಳಲಾರೆ ತಾಳಲಾರೆ

Add a comment ಮೇ 7, 2010

ಅಕ್ಟೋಬರ್ 2021
ಬುಧ ಗುರು ‍ಶು ಶನಿ ಭಾನು ಸೋಮ ಮಂಗಳ
 12345
6789101112
13141516171819
20212223242526
2728293031  

ವಿಭಾಗಗಳು

ಪುಟಗಳು