ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು
ಕಡಲು ನಿನ್ನದೆ ಹಡಗು ನಿನ್ನದೆ ಮುಳುಗದಿರಲಿ ಬದುಕು

ಬೆಟ್ಟವು ನಿನ್ನದೆ ಬಯಲು ನಿನ್ನದೆ ಹಬ್ಬಿನದಲಿ ಪ್ರೀತಿ
ನೆಳಲೊ ಬಿಸಿಲೊ ಎಲ್ಲವು ನಿನ್ನದೆ ಇರಲಿ ಏಕ ರೀತಿ

ಆಗೊಂದು ಸಿಡಿಲು ಈಗೊಂದು ಮುಗಿಲು ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು ನಿನಗೆ ನಮಸ್ಕಾರ

ಅಲ್ಲಿ ರಣದುಂದುಭಿ ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ
ಆ ಮಹಾಕಾವ್ಯ ಈ ಭಾವಗೀತೆ ನಿನ್ನ ಪದ ಧ್ವನಿಯೆ

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರೂ ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ

ಎದೆ ತುಂಬಿ ಹಾಡಿದೆನು ಇಂದು ನಾನು
ಮನವಿಟ್ಟು ಕೇಳಿದಿರಿ ಇಲ್ಲಿ ನೀವು..

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ

ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ

ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪೋ
ಬಂದು ಚೀರುವೆದೆಯ ಭಾವ ಹೇಳಲಾರೆ ತಾಳಲಾರೆ

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನ್ನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಕಣದಿ ರಿಂಗಣ

ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ
ಒಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ

ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತೊಡೆವುದೇ ಜೀವನ

ಯಾವ ಮೋಹನ ಮುರಳಿ ಕರೆಯಿತು ಇದ್ದಕ್ಕಿದ್ದೆಡೆ ನಿನ್ನನ್ನು
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು

ನೀನಿಲ್ಲದೆ ನನಗೇನಿದೆ
ಮನಸೆಲ್ಲಾ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲಾ ಕಣ್ಣಲ್ಲೆ ಸೆಲೆಯಾಗಿದೆ

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು
ಎದೆಯಾಸೆ ಏನು ಎಂದು ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೆ ನಿನ್ನಿಂದ ನಾ ಬಯಸಿದೆ

ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ
ಒಳಗಿರುವ ಎದೆ ನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ


ರೇಶಿಮೆ ಹುಳದಂತೆ ನನ್ನ ಪ್ರೀತಿ
ನನ್ನ ಮನಸ್ಸಿನ ಸುತ್ತ ನಾನೇ
ಕನಸಿನ ನೂಲು ಹೆಣೆದು ಬಿಟ್ಟು
ಅದರಲ್ಲೆ ವಿಲ ವಿಲ ಹೊದ್ದಾಡಿ
ಹೆಣವಾಗಿ ಕಣ್ಣೀರಿನಲಿ ತೋಯುತ್ತಿರವೆ
ಪ್ರತಿಕ್ರಿಯಿಸಲಾರದ ನನ್ನ ಬಿಕ್ಕುವಿಕೆಗೆ
ನಗುವುದೊಂದೆ ಗೊತ್ತು ನಿನಗೆ.

ನವ ವಸಂತದಂತೆ ನನ್ನ ಪ್ರೀತಿ
ಪಂಜರದ ಬಂಧನದಲ್ಲಿರುವ ಕೋಗಿಲೆ
ಮೇಲೆ ಮೋಡ ಮುಸುಕಿದ ಮುಗಿಲು
ಪ್ರೀತಿ ನೊಗವ ಹೆರಲಾರದ ಹೆಗಲು
ಕೆಳಗೆ ಕಾಲು ಕಟ್ಟಿದ ನವಿಲು
ಹರಿಯುವುದು ರಾಗಭಾವದ ಹೊನಲು
ಇದ ನೋಡುವುದಷ್ಟೆ ಗೊತ್ತು ನಿನಗೆ.

ಹೇಳಲು ಬಹಳ ಸುಲಭ ನನ್ನ ಪ್ರೀತಿ
ಕಂಗಳ ಮೇಲೊಂದು ತೆರೆಯಂಥ ಪೊರೆ
ಭೂಮಿಯೊಳಗೆ ಬೇರು ಬಿಟ್ಟ ಸಸಿ
ಒಳಗುಟ್ಟು ತೆರೆಯದೆ ಸತ್ಯ ಗೋಚರಿಸದು
ಅಸಹಾಯಕ ಹುಡುಗಿಯರ ಪ್ರೇಮ ಬೆಸುಗೆ
ಹೀಗೆ ಉಟ್ಟು ಹಾಗೆ ಬಿಟ್ಟು ಎಸೆವ ಷೋಕಿಯದು
ಕ್ಷಣಿಕ ಸುಖದ್ದು ನನ್ನೆಲ್ಲ ಈ ಪ್ರೀತಿ ನಿನಗೆ.


ತಿಳಿ ಮನಸ್ಸಿನಾಳದಲ್ಲೊಂದು ಶಬ್ಧ
ಸುರುಳಿ ಸುತ್ತುತ್ತಿದೆ ಮೂಕವಾಗಿ.
ಟಪ್ಪನೆ ಬಿದ್ದ ರಭಸಕ್ಕೇನೋ,
ಕಣ್ಣಿಗು ಕಾಣದಾಗಿದೆ ಅದರ ವೇದನೆ.

ಮೊದಲೆಲ್ಲ ಹೀಗಿರಲಿಲ್ಲ ಸಾಮಾನ್ಯವಾಗಿ
ಉಸಿರು ನಿಂತ ಮರವಾಗಿ.
ಇದು ಕಂಡು ಕೇಳರಿಯದ ಸುದ್ದಿ
ಚೆಲ್ಲಾಪಿಲ್ಲಿಯಾಗಿದ್ದು ಯಾರ ಮನವೋ…?

ದೂರದಲ್ಲೆಲ್ಲೋ ನರಳಾಟ ಕನವರಿಸುತ್ತಿದೆ
ಸ್ಮಶಾನದ ಮೂಲೆಮೂಲೆಗೂ ಹರಡಿ.
ನಿನ್ನ ಮನೆ, ಮನ ದೂರವಿರಲಿ
ನನಸಾಗದ ನನ್ನ ಕನಸಿನ ಸಮಾಧಿಯಿಂದ.

ಒಳಗೆಲ್ಲೊ ಮುಚ್ಚಿಟ್ಟಿದ್ದ ಮೌನ
ಎಲ್ಲೊ ಹರಿದು ಹೋಗುತ್ತಿರಬಹುದು,
ಇಲ್ಲದ್ದು ಹಾಡಾಗಲೂಬಹುದು ಯಾಕೆಂದರೆ
ನಾನು ಕವಿತೆ ನೀನದರ ಆತ್ಮ ಅಲ್ಲವೆ…?